ಇಲ್ಲಿನ ಶ್ರೀಶಾರದಾ ಪೀಠದ ಶ್ರೀಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದವರು ಕೈಗೊಂಡಿರುವ ಅತಿರುದ್ರ ಮಹಾಯಾಗದ ಎರಡನೇ ದಿನಕ್ಕೆ ಅಪಶಕುನ ಎದುರಾಗಿದೆ. ದೇವೇಗೌಡರ ಅತ್ತೆ ಕಾಳಮ್ಮ ಅವರು ವಿಧಿವಶವಾಗಿದ್ದಾರೆ. ಆದರೆ, ಸೂತಕದ ನಡುವೆಯೂ ಯಾಗ ನಡೆಸಲಾಗುವುದು ಎಂದು ಕುಟುಂಬದ ಆಪ್ತರು ಹೇಳಿದ್ದಾರೆ.ಹೊಳೆನರಸೀಪುರ ತಾಲ್ಲೂಕು ಮುತ್ತಿಗೆ ಹಿರಿಯಳ್ಳಿಯಲ್ಲಿ ಗುರುವಾರ ನಡೆದ ಕಾಳಮ್ಮ ಅವರ ಅಂತ್ಯಕ್ರಿಯೆ ದೇವೇಗೌಡ, ಚೆನ್ನಮ್ಮ ದೇವೇಗೌಡ ಅವರುಗಳು ಭಾಗಿಯಾಗಿದ್ದರು. ಸಾವಿನ ನೋವು ಕಳೆದುಕೊಂಡ ಬಳಿಕ ಶುದ್ಧಿ ಮಾಡಿಕೊಂಡು ದೇವೇಗೌಡ ದಂಪತಿ, ಶೃಂಗೇರಿಗೆ ಮತ್ತೆ ಆಗಮಿಸಲಿದ್ದಾರೆ.ಜಗದ್ಗುರುಗಳಾದ ಶ್ರೀಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಯಾಗದ ಸಂಕಲ್ಪವನ್ನು ಬುಧವಾರದಂದು ನೆರವೇರಿತು. ದೇವೇಗೌಡ ಹಾಗೂ ಚನ್ನಮ್ಮ ಅವರು ಉಭಯ ಶ್ರೀಗಳಿಗೆ ಫಲತಾಂಬೂಲ ಸಮರ್ಪಿಸಿ ಆಶೀರ್ವಾದ ಪಡೆದ ಬಳಿಕ ಅತಿರುದ್ರ ಮಹಾಯಾಗಕ್ಕೆ ಚಾಲನೆ ನೀಡಲಾಯಿತು. ಸಾವಿನ ಸುದ್ದಿ ಕಿವಿಗೆ ಬೀಳುವುದಕ್ಕೂ ಮುನ್ನ ಈ ಯಾಗದ ಸಂಕಲ್ಪವಾಗಿದ್ದರಿಂದ ಯಾಗ ಮುಂದುವರೆಸಬಹುದು. ಯಾವುದೇ ದೋಷ ತಟ್ಟುವುದಿಲ್ಲ ಎಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. <br /> <br />